ಮಂಗಲೀಶ
	596-610. ಮಂಗಳೇಶನೆಂದೂ ಕರೆಯುವ ಈತ ಒಂದನೆಯ ಕೀತಿವರ್ಮನ ಅನಂತರ ಪಟ್ಟಕ್ಕೆ ಬಂದ ಬಾದಾಮಿಯ ಚಳುಕ್ಯ ಮನೆತನದ ದೊರೆ. ಕೀರ್ತಿವರ್ಮನ ಮರಣಕಾಲದಲ್ಲಿ ಆತನ ಮಕ್ಕಳು ಚಿಕ್ಕವಯಸ್ಸಿನವರಾಗಿದ್ದುದರಿಂದ ಆತನ ತಮ್ಮನಾದ ಈ ಮಂಗಲೀಶ ಆಡಳಿತ ವಹಿಸಿಕೊಂಡು 596ರಲ್ಲಿ ಪಟ್ಟವೇರಿದ. ಇವನನ್ನು ಮಂಗಲರಾಜ, ಮಂಗಲಾರ್ಣವ, ಮಂಗಲೇಶ್ವರ ಮೊದಲಾದ ಹೆಸರುಗಳಿಂದ ಕರೆಯುತ್ತಿದ್ದರೆಂದೂ ರಣವಿಕ್ರಮ, ರಣವಿಕ್ರಾಂತ, ಉರುರಣಪರಾಕ್ರಮ ಶ್ರೀ ಪೃಥ್ವೀವಲ್ಲಭೇಂದ್ರ ಮೊದಲಾದ ಬಿರುದುಗಳಿದ್ದುವೆಂದೂ ಐಹೊಳೆ ಪ್ರಶಸ್ತಿ ಮತ್ತು ಮಹಾಕೂಟಸ್ತಂಭಶಾಸನ ಮಾಹಿತಿ ನೀಡುತ್ತವೆ. ಮಂಗಲೀಶ ಮೊದಲು ಕಳಚುರಿ ದೊರೆ ಬುದ್ಧರಾಜನನ್ನು 602ರಲ್ಲಿ ಸೋಲಿಸಿದ ಪರಿಣಾಮವಾಗಿ ಮಾಹಿ ನದಿಯವರೆಗಿನ ಉತ್ತರದ ಅನೇಕ ಸಂಸ್ಥಾನಗಳು ಚಳುಕ್ಯರ ಅಧಿಪತ್ಯಕ್ಕೊಳಪಟ್ಟವು. ಮಂಗಲೀಶ ಈ ಯುದ್ಧದಿಂದ ಗಳಿಸಿದ ಐಶ್ವರ್ಯವನ್ನು ಬಾದಾಮಿಯ ಸಮೀಪದಲ್ಲಿರುವ ಮಕುಟೇಶ್ವರ ದೇವಾಲಯಕ್ಕೆ ದಾನವಾಗಿ ಕೊಟ್ಟುದಲ್ಲದೆ, ತನ್ನ ವಿಜಯದ ಗುರುತಾಗಿ ದೇವಾಲಯದ ಮುಂದೆ ಒಂದು ವಿಜಯಸ್ತಂಭವನ್ನೂ ನಿರ್ಮಿಸಿದ. ದೇವಾಲಯಕ್ಕೆ ಮಂಗಲೀಶ ತನ್ನ ತಾಯಿ ದುರ್ಲಭದೇವಿಯ ಸಮ್ಮುಖದಲ್ಲಿ ಕೆಸುವಳಲು, ಕೆಂದೂರಮಾನ್ಯ, ನಂದಿಗ್ರಾಮ ಮೊದಲಾದ ಹತ್ತು ಗ್ರಾಮಗಳನ್ನು ಅನುದಾನ ಸಹ ಮಾಡಿದ. ಮಹಾಕೂಟದ ಈ ದಾನಶಾಸನ 602 ಏಪ್ರಿಲ್ 12ರಂದು ಸ್ಥಾಪನೆಗೊಂಡಿದೆ.

	ಆ ವೇಳೆಗೆ ಕೊಂಕಣದ ಬಲಿಷ್ಠ ಸಾಮಂತ ಸ್ವಾಮಿರಾಜ ಹದಿನೆಂಟು ಯುದ್ಧಗಳಲ್ಲಿ ಜಯಗಳಿಸಿ ಕೊಬ್ಬಿದ್ದ. ಮಂಗಲೀಶ ಈತನನ್ನು ಸೋಲಿಸಿ ರೇವತಿ ದ್ವೀಪವನ್ನು (ಈಗಿನ ಗೋವ) ವಶಪಡಿಸಿಕೊಂಡ. ಮಹಾಕೂಟಸ್ತಂಭ ಶಾಸನದ ಪ್ರಕಾರ ಮಂಗಲೀಶ ಗಂಗರು, ಪಲ್ಲವರು, ಚೋಳರು, ಆಳುಪರು ಮತ್ತು ಕದಂಬರನ್ನು ಸೋಲಿಸಿದನೆಂದು ತಿಳಿದುಬರುತ್ತದೆ. ತನ್ನನ್ನು ಪರಮಭಾಗವತ ಎಂಬುದಾಗಿ ಕರೆದುಕೊಂಡಿದ್ದಾನೆ. ಪರಾಕ್ರಮಿ, ಉದಾರಿ ಹಾಗೂ ದೈವಭಕ್ತ ಆದ ಈತ ಕೊನೆಗಾಲದಲ್ಲಿ ಸಿಂಹಾಸನವನ್ನು ನಿಜ ಹಕ್ಕುದಾರನಾದ ಪುಲಕೇಶಿಯಿಂದ ತಪ್ಪಿಸಲು ಪ್ರಯತ್ನಿಸಿದ. ಪುಲಕೇಶಿ ಪ್ರಾಪ್ತ ವಯಸ್ಕನಾಗುತ್ತಲೇ ಆಡಳಿತಸೂತ್ರವನ್ನು ಅವನ ಕೈಗೆ ಕೊಡಲಿಲ್ಲ. ಬದಲು ಮಗನಿಗೇ ರಾಜಪ್ರಭುತ್ವ ಉಳಿಸಿಕೊಳ್ಳುವ ದುರ್ಬುದ್ಧಿಯಿಂದ ಪುಲಕೇಶಿಯನ್ನು ದೂರವಿಟ್ಟು ಮಗನನ್ನೇ ಉತ್ತರಾಧಿಕಾರಿಯಾಗಿ ನೇಮಿಸಿದ. ಸಿಟ್ಟಿಗೆದ್ದ ಪುಲಕೇಶಿ ಬಂಡೆದ್ದ. ನಡೆದ ಅಂತರ್ಯುದ್ಧದಲ್ಲಿ ಮಂಗಲೀಶ ಸೋತು ಪ್ರಾಣನೀಗಿದ (610). ಪುಲಕೇಶಿ ಇಮ್ಮಡಿ ಪುಲಕೇಶಿಯಾಗಿ ಪಟ್ಟಾಭಿಷಿಕ್ತನಾದ.					
 (ಸಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ